ಊದುತುಪಾಕಿ
	ಉದ್ದದ ಕೊಳವೆಯ ಮೂಲಕ ಬಲಪೂರಿತವಾಗಿ ಗಾಳಿಯನ್ನು ಊದಿ ಅದರ ಇನ್ನೊಂದು ಕೊನೆಯಲ್ಲಿ ಸಿಕ್ಕಿಸಿರುವ ವಿಷಯುಕ್ತ ಅಲಗನ್ನು ಗುರಿಯೆಡೆಗೆ ಎಸೆಯಲು ಉಪಯೋಗಿಸುವ ಸಲಕರಣೆ (ಬ್ಲೋಗನ್). ಆದಿಜನಾಂಗಗಳ ಆಯುಧಗಳ ಪೈಕಿ ಇದೊಂದು. ತುಪಾಕಿ ಎಂದೂ ಕರೆದಿದ್ದರೂ ವಾಸ್ತವವಾಗಿ ಇದೊಂದು ಉದ್ದವಾದ (6'-15') ಮರದ ಕೊಳವೆ. ಬಾಯ ಹತ್ತಿರದ ವ್ಯಾಸ 1", ಮೂತಿಯ ತುದಿಯಲ್ಲಿ ¼". ಮಲೆಯ ದೇಶದ ಬೋರ್ನಿಯೊ ದ್ವೀಪದಲ್ಲಿ ದೊರೆವ ಹಗುರು ಆದರೆ ಗಟ್ಟಿಯಾದ ಮರವನ್ನು ಕೊರೆದು ಈ ಕೊಳವೆಯನ್ನು ಮಾಡುತ್ತಾರೆ. ಅಲಗುಗಳ ಉದ್ದ 8" ಅಥವಾ 9". ಅವುಗಳ ತುದಿ ಬಹಳ ಮೊನಚು; ಅಲ್ಲಿಗೆ ಹರಿತ ಮತ್ತು ಚೂಪಾದ ಮೂಳೆಯ ಅಥವಾ ಲೋಹದ ವಿಷಯುಕ್ತ ಅಲಗನ್ನು ಪೋಣಿಸಿರುತ್ತಾರೆ. ಮಲೆಯ ಪರ್ಯಾಯ ದ್ವೀಪದ ಬೋರ್ನಿಯೊದಲ್ಲಿನ ಕಾಡು ಜನ ಇಂಥ ತುಪಾಕಿಯನ್ನು ಉಪಯೋಗಿಸುತ್ತಾರೆ. ದಕ್ಷಿಣ ಅಮೆರಿಕದಲ್ಲಿ ದುಷ್ಟ ಮೃಗಗಳನ್ನು ಕೊಲ್ಲುವುದಕ್ಕೂ ಇವನ್ನು ಉಪಯೋಗಿಸುತ್ತಾರೆ.
(ಎ.ಎನ್.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ